ಕಾರೆಗಿಡ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ರೂಬಿಯೇಸೀ ಕುಟುಂಬಕ್ಕೆ ಸೇರಿದ ಕ್ಯಾಂತಿಯಮ್ ಪಾರ್ವಿಪ್ಲೋóರಮ್ ಎಂಬ ಶಾಸ್ತ್ರೀಯ ಹೆಸರಿನ ಗಿಡ. ಮುಖ್ಯವಾಗಿ ಇದು ಉಷ್ಣಪ್ರದೇಶಗಳ ಬಂಜರುಭೂಮಿಯಲ್ಲಿ ಕಳೆಯಂತೆ ಬೆಳೆಯುತ್ತದೆ. ಭಾರತದಲ್ಲಿ ಈ ಪ್ರಭೇದವಲ್ಲದೆ ಇದರಂತೆಯೇ ಇರುವ ಕ್ಯಾ. ಡೈಕಾಕ್ಕಮ್ ಮತ್ತು ಕ್ಯಾ. ಅಂಬೇಲೇಟಮ್ ಎಂಬ ಪ್ರಭೇದಗಳು ಬೆಳೆಯುತ್ತವೆ. ಇವು ಚಿಕ್ಕ ಕುರುಚಲು ಗಿಡಗಳಾಗಿಯೊ ಸಣ್ಣ ಪೊದರುಗಳಾಗಿಯೊ ಇಲ್ಲವೆ ಸಣ್ಣ ಮರಗಳಾಗಿಯೊ ಬೆಳೆಯುತ್ತವೆ. ಎಲ್ಲ ಪ್ರಭೇದಗಳಲ್ಲೂ ಎಲೆಗಳು ಕಾಂಡದ ಮೇಲೆ ಅಭಿಮುಖವಾಗಿ ಜೋಡಣೆಗೊಂಡಿವೆ. ಇವುಗಳ ಕಂಕುಳುಗಳಲ್ಲಿ ಚೂಪಾದ ಮತ್ತು ಗಟ್ಟಿಯಾದ ಮುಳ್ಳುಗಳಿವೆ. ಇವು ಮಾರ್ಪಾಡಾದ ಕಂಕುಳು ಮೊಗ್ಗುಗಳು. ಹೂಗಳು ಸಣ್ಣವು, ಆಕರ್ಷಕವಾಗಿಲ್ಲ. ಮಧ್ಯಾರಂಭಿ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹಣ್ಣು ಅಷ್ಟಿಫಲ ಮಾದರಿಯದು. ಮಾಗಿದಾಗ ಕಂದುಬಣ್ಣಕ್ಕೆ ತಿರುಗುತ್ತದೆ. ಒಳಗೆ ಎರಡು ಬೀಜಗಳಿವೆ. ಹಣ್ಣು ತಿನ್ನಲು ಯೋಗ್ಯವಾಗಿದೆ. ಕ್ಯಾಡೈ ಕಾಕ್ಕಮ್‍ನ ತೊಗಟೆಯನ್ನು ಜ್ವರಕ್ಕೆ ಉಪಯೋಗಿಸುತ್ತಾರೆ. ಮೂಳೆಗಳಿಗೆ, ಪೆಟ್ಟು ಬಿದ್ದಾಗ ಇದನ್ನು ಉಪಯೋಗಿಸುವುದುಂಟು. ಇದರ ಕಾಂಡವನ್ನು ಕೈ ಬೆತ್ತಗಳಿಗೂ ವ್ಯವಸಾಯದ ಸಲಕರಣೆಗಳಿಗೂ ಬಾಚಣಿಗೆ ಗೊಂಬೆ ಮುಂತಾದುವುಗಳ ತಯಾರಿಕೆಗೂ ಬಳಸುತ್ತಾರೆ. ಕ್ಯಾ. ಪಾರ್ವಿಪ್ಲೋರಮಿನಬೇರು ಮತ್ತು ಎಲೆಗಳ ಕಷಾಯವನ್ನು ಕೆಲವು ಶೀತ ಭೇದಿಗಳಿಗೆ ಉಪಶಮನ ಔಷಧಿಯಾಗಿಯೂ ಬೇರನ್ನು ಜಂತುಹುಳು ನಾಶಕವಾಗಿಯೂ ಉಪಯೋಗಿಸುತ್ತಾರೆ. ಕಾಂಡವನ್ನು ಬೀಸುವ ಕಲ್ಲುಗಳ ಹಿಡಿಗಳಾಗಿಯೂ ಅಚ್ಚುಗಳಾಗಿಯೂ ಬಳಸುವರು. ಅಲ್ಲದೆ ಎಲೆ, ಎಳೆಯಕಾಂಡ ಮತ್ತು ಹಣ್ಣುಗಳು ಆಡುಗಳಿಗೆ ಉತ್ತಮವಾದ ಮೇವು.

(ಎಂ.ಸಿ.ಆರ್.; ಎನ್.)